ಊರುಗೋಡೆ (ಗುದ್ದುಗ)
	ಕಮಾನು ಸೇತುವೆಯ ಅಥವಾ ಇತರ ಸಾಲು ಕಮಾನು ಕಟ್ಟಡಗಳ ಕೊನೆಯ ಕಂಬಗಳಿಗೆ ಆಶ್ರಯವಾಗಿರುವ ಗೋಡೆಗಳು (ಅಬಟ್‍ಮೆಂಟ್, ಗುದ್ದುಗ). ಈ ಗೋಡೆಯ ಮೇಲೆ ಕಮಾನಿನ ಮೂಲಕ ಓರೆಯಾಗಿ ಬರುವ ಹೊರೆಯ ಪ್ರಭಾವದಿಂದ ಗೋಡೆಯು ಹಿಂದಕ್ಕೆ ಬೀಳುವ ಸಂಭವವಿರುವುದರಿಂದ ಇದರ ಅಡ್ಡಸೀಳು ವಿಷಮ ಚತುರಶ್ರ (ಟ್ರ್ಯಾಪೆeóÉೂೀಡಿಕಲ್) ಆಗಿರುತ್ತದೆ.

ಚಿತ್ರ-ಊರುಗೋಡೆ-(ಊ)

ಅಂದರೆ, ಇದರ ದಪ್ಪ, ಕಮಾನು ಬಂದು ಸೇರುವ ಮಟ್ಟದಲ್ಲಿರುವುದಕ್ಕಿಂತ ಬುಡದಲ್ಲಿ ಅಧಿಕವಾಗಿರುತ್ತದೆ. ಓರೆಯಾಗಿ ಬೀಳುವ ಕಮಾನಿನ ಒತ್ತಡ ತೂಕವಾಗಿ ಬೀಳುವ ಊರುಗೋಡೆಯ ಮತ್ತು ಅದರ ಮೇಲ್ಭಾಗದ ಕಟ್ಟಡದ ಭಾರ ಇವೆರಡರ ಪರಿಣಾಮ ತೂಕವಾಗಿದ್ದರೆ (ವರ್ಟಿಕಲ್) ಗೋಡೆ ಮೇಲಿನಿಂದ ಕೆಳಗಿನವರೆಗೆ ಒಂದೇ ದಪ್ಪನಾಗಿರಬಹುದು. ಅದಿಲ್ಲದೆ ಪರಿಣಾಮ ಓರೆಯಾಗಿದ್ದರೆ ಗೋಡೆಯ ಬುಡದಲ್ಲಿ ತುಯ್ತದ ಒತ್ತಡ (ಟನ್‍ಸೈಲ್) ಉಂಟಾಗಿ ಗೋಡೆ ಬಿರಿಯುವ ಸಂಭವವಿರುತ್ತದೆ. ಇದನ್ನು ತಡೆಯುವುದಕ್ಕಾಗಿಯೇ ಗೋಡೆಯ ಬುಡದ ದಪ್ಪವನ್ನು ಹೆಚ್ಚಿಸಬೇಕಾಗುತ್ತದೆ. ಕಮಾನುಗಳಿಲ್ಲದ ಸೇತುವೆಗೂ ಗೋಡೆಯ ಹಿಂಭಾಗದಲ್ಲಿ ವಿಷಮ ಚತುರಶ್ರವಾಗಿಯೇ ಇರಬೇಕಾಗುತ್ತದೆ. ಕಾರಣ, ಈ ಗೋಡೆಯ ಹಿಂಭಾಗದಲ್ಲಿ ಬಳಿಸಾರುವ ರಸ್ತೆಗಾಗಿ ಮಣ್ಣಿನ ಏರಿ ಇರುವುದರಿಂದ ಈ ಏರಿಯ ಮಣ್ಣು ಊರುಗೋಡೆಯ ಮೇಲೆ ಪಾಶ್ರ್ವ ಒತ್ತಡವನ್ನೂ ಹೂಡುತ್ತದೆ. ಈ ಒತ್ತಡಕ್ಕಾದರೂ ಊರುಗೋಡೆಯನ್ನು ಬಲಪಡಿಸಬೇಕಾಗುತ್ತದೆ. ಕಟ್ಟಡದ ಕಮಾನು ಅರ್ಧಚಕ್ರಾಕಾರವಾಗಿದ್ದರೆ ಊರುಗೋಡೆಯ ಮೇಲೆ ಓರೆ ಒತ್ತಡವಿರುವುದಿಲ್ಲ. ಸೇತುವೆ ಕಟ್ಟಡಗಳ ಊರುಗೋಡೆಗಳ ಎರಡೂ ಪಾಶ್ರ್ವಗಳಲ್ಲೂ ಮಂದವಾದ ರೆಕ್ಕೆ ಗೋಡೆಗಳನ್ನು ಕಟ್ಟಿರುತ್ತಾರೆ. ಈ ಗೋಡೆಗಳು ಊರುಗೋಡೆಗಳಿಗೆ ಹೆಚ್ಚು ಹತೋಟಿಯಲ್ಲಿಟ್ಟುಕೊಳ್ಳಲೂ ನೀರಿನ ಪ್ರವಾಹವನ್ನು ಸೇತುವೆ ಕಣ್ಣುಗಳೆಡೆಗೆ ತಿರುಗಿಸುವುದಕ್ಕೂ ಅನುವಾಗುತ್ತವೆ.							
(ಕೆ.ಎಸ್.ಕೆ.)
  (ಪರಿಷ್ಕರಣೆ: ಎಂ.ಜಿ.ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ